ನಾಗರ ವಾಸ್ತುಶೈಲಿ -
ಆಗಮ ಮತ್ತು ಶಿಲ್ಪಶಾಸ್ತ್ರಗಳ ಪ್ರಕಾರ ಭಾರತದ ವಾಸ್ತುಪದ್ಧತಿಯಲ್ಲಿ ಗುರುತಿಸಿರುವ ಮೂರು ಪ್ರಮುಖಶೈಲಿಗಳಲ್ಲಿ ಉತ್ತರ ಭಾರತದಲ್ಲಿ ರೂಢಿಯಾಗಿರುವ ಕಟ್ಟಡಶೈಲಿ. ಪ್ರಮುಖ ವಾಸ್ತು ಶಾಸ್ತ್ರ ಗ್ರಂಥಗಳ ಪ್ರಕಾರ, ಕಟ್ಟಡದ ಬುಡದಿಂದ ಶಿಖರಾಗ್ರದವರೆಗೂ ಚತುರಸ್ರ ಅಂದರೆ ಚಚ್ಚೌಕ ಅಥವಾ ಆಯಾಕಾರವಾಗಿರುವ ಕಟ್ಟಡಗಳು ಈ ಶೈಲಿಗೆ ಸೇರುತ್ತವೆ. ಗರ್ಭಗುಡಿಯ ಮೇಲಿನ ಗ್ರೀವ ಮತ್ತು ಇತರ ಭಾಗಗಳು ಚತುರ್ಮುಖವುಳ್ಳದ್ದಾಗಿರುತ್ತವೆ. ಹಿಮಾಲಯ ಮತ್ತು ವಿಂಧ್ಯಪರ್ವತಗಳ ನಡುವಣ ಪ್ರದೇಶ ಅಥವಾ ಪ್ರಾಚೀನ ಆರ್ಯಾವರ್ತದ ದೇವಾಲಯಗಳನ್ನು ಈ ಶೈಲಿಯವೆಂದು ಪರಿಗಣಿಸಬೇಕೆಂದು ಎಲ್ಲ ಪ್ರಮುಖ ವಾಸ್ತುಶಾಸ್ತ್ರಗ್ರಂಥಗಳು ಹೇಳುತ್ತಿದ್ದರೂ ವಿಂಧ್ಯಪರ್ವತಗಳ ದಕ್ಷಿಣಭಾಗದಲ್ಲೂ ಆ ಶೈಲಿಯ ಅನೇಕ ದೇವಾಲಯಗಳು ಕಂಡುಬರುತ್ತವೆ.

  ನಾಗರಶೈಲಿಯ ದೇವಾಲಯಗಳಲ್ಲಿ ಶಿಲುಬೆ ಅಥವಾ ಆಯಾಕಾರದ ತಲ ವಿನ್ಯಾಸ ಮತ್ತು ವಿಮಾನದ ಮೇಲ್ಭಾಗ ಶಿಖರದ ಕೇಂದ್ರಬಿಂದುವಿನತ್ತ ಬಾಗಿದಂತಿರುವ ಚತುರಸ್ರವಾದ ಲಂಬವಿನ್ಯಾಸಗಳು ಇರುತ್ತವೆ. ಶಿಖರದ ತುದಿಯಲ್ಲಿ ಚಪ್ಪಟೆ ವೃತ್ತಾಕಾರದ ಮತ್ತು ಅಂಚುಗಳನ್ನು ಅರೆಗೊಳವಿಯಾಕಾರದಲ್ಲಿ ಕಡೆದ, ನೆಲ್ಲಿಕಾಯಿಯಂತೆ ಗಾಡಿಗಳುಳ್ಳ, ಆಮಲಕ ಶಿಲೆಯನ್ನು ಇಟ್ಟಿರುತ್ತಾರೆ. ಆಯಾಕಾರದ ತಲವಿನ್ಯಾಸದಲ್ಲಿ ಮುನ್‍ಚಾಚಿದ ಭಾಗಗಳಿರುವುದರಿಂದ ಕಟ್ಟಡ ಶಿಲುಬೆಯಾಕಾರದಲ್ಲಿರುತ್ತದೆಯಲ್ಲದೆ ಗೋಡೆಯ ಹೊರಮೈಯಲ್ಲಿ ಸಮಕೋನಗಳು ಏರ್ಪಟ್ಟಿರುತ್ತದೆ. ದೇವಘಡದಲ್ಲಿ ಕಲ್ಲಿನಲ್ಲಿ ಕಟ್ಟಿದ ಮತ್ತು ಭೀತರ್‍ಗಾಂವ್‍ನಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ 5-6ನೆಯ ಶತಮಾನಗಳ ಗುಪ್ತವಂಶಕಾಲದ ವಿಷ್ಣು ದೇವಾಲಯಗಳು ಆದಿಕಾಲದ ನಾಗರಶೈಲಿಯ ನಿರ್ಮಾಣಗಳಿಗೆ ಉತ್ತಮ ನಿದರ್ಶನಗಳು. ದೇವಘಡದ ಗುಡಿಯಲ್ಲಿ ಪಾಶ್ರ್ವಗಳ ಗೋಡೆಗಳ ಮಧ್ಯಭಾಗದಲ್ಲಿದ್ದು ಮುಂಭಾಗದ ಬಾಗಿಲುವಾಡವನ್ನು ಹೋಲುವ ಚಿತ್ರಫಲಕಗಳು ಅರೆಗಂಬಗಳ ನಡುವೆ ಎದ್ದು ಕಾಣುವಂತಿದೆ. ಈ ಲಕ್ಷಣ ಅನಂತರ ಕಾಲದ ನಾಗರಶೈಲಿಯ ದೇವಾಲಯಗಳಲ್ಲಿ ಸತತವಾಗಿ ಕಂಡುಬರುತ್ತವೆ. ನೇರ ಅಂಚುಗಳುಳ್ಳ ಪಿರಮಿಡ್ಡಿನ ಆಕಾರದ ಶಿಖರ ಈ ಶೈಲಿಯ ಮತ್ತೊಂದು ಮುಖ್ಯ ಲಕ್ಷಣ. 7ನೆಯ ಶತಮಾನಕ್ಕೆ ಸೇರಿದ ಬುದ್ಧಗಯೆಯ ಮಹಾಬೋಧಿಮಂದಿರದ ಶಿಖರ ಇದಕ್ಕೆ ಒಳ್ಳೆಯ ನಿದರ್ಶನ. ಆದಿಕಾಲದ ದೇವಾಲಯಗಳಲ್ಲಿ ಗರ್ಭಗುಡಿಯ ಚಾವಣಿ ಮತ್ತು ಶಿಖರದ ಬುಡಗಳು ಸಂಧಿಸುವಲ್ಲಿ ಸ್ವಲ್ಪ ಒಳಸರಿದಂತಿರುವ ಚಿತ್ರಪಟ್ಟಿಕೆ ಇದೆ. ಕಾಲಾನುಕ್ರಮದಲ್ಲಿ ಈ ಚಿತ್ರಪಟ್ಟಿಕೆ ನಾಗರಶೈಲಿಯ ಶಿಖರದ ಪ್ರಗತಿಯಲ್ಲಿ ಒಂದು ಪ್ರಮುಖ ಅಂಶವಾಯಿತು.

  ವಾಸ್ತು ಶಾಸ್ತ್ರಗಳ ಸಾಹಿತ್ಯಿಕ ಆಧಾರಗಳನ್ನು ಬಿಟ್ಟು, ವಿವಿಧ ನೆಲೆಗಳಲ್ಲಿ ಅಸ್ತಿತ್ವದಲ್ಲಿರುವ ದೇವಾಲಯಗಳ ಅಧ್ಯಯನದಿಂದ ನಾಗರಶೈಲಿಯ ಲಕ್ಷಣಗಳನ್ನು ಹೀಗೆ ಗುರ್ತಿಸಬಹುದು: 1. ಚಾವಣಿಸೂರಿನ ಮೇಲಿರುವ ಇಡೀ ಕಟ್ಟಡದ ಭಾಗವನ್ನು ಶಿಖರವೆಂದು ಪರಿಗಣಿಸಲಾಗುತ್ತದೆ. 2. ಗರ್ಭಗುಡಿಯನ್ನುಳಿದು ಇತರ ಭಾಗಗಳ ಚಾವಣಿಯ ಮೇಲಿರುವ ಸಣ್ಣ ಪ್ರಮಾಣದ ಶಿಖರಗಳು ಪ್ರಧಾನ ಶಿಖರವನ್ನು ಸುತ್ತುಗಟ್ಟಿರುತ್ತವೆ. 3. ಮುಂಭಾಗದ ಮಂಟಪಗಳಲ್ಲಿ ಸುತ್ತಿನ ಗೋಡೆಗಳಿಲ್ಲದೆ ತೆರಪಾಗಿರುವುದರಿಂದ ಗರ್ಭಗುಡಿಯ ಸುತ್ತಲ ಪ್ರದೇಶ ಮಂಟಪದಂತಿರುತ್ತದೆ. 4. ದೇವಾಲಯದ ಚಾವಣಿಭಾಗದ ಸಣ್ಣಶಿಖರಗಳ ಮೇಲೆ ವಿತಾನರೀತಿಯ ಅಲಂಕರಣ ಕೆತ್ತನೆಗಳಿರುತ್ತವೆ. 5. ಗೋಪುರದ್ವಾರ ಇರಲೇಬೇಕೆಂಬ ನಿಯಮವಿಲ್ಲ; ಅದು ಇದ್ದಾಗ ದೇವಾಲಯದ ಮುಖ್ಯದ್ವಾರಕ್ಕೂ ಗೋಪುರದ್ವಾರಕ್ಕೂ ತಲವಿನ್ಯಾಸದಲ್ಲಿ ಹೊಂದಾಣಿಕೆ ಇರುವುದಿಲ್ಲ. 6. ಅಂತರಾಲದ ಚಾವಣಿಯ ಮೇಲೆ ಸುಕನಾಸ ಶಿಖರಕ್ಕೆ ಕೂಡಿದಂತಿರುತ್ತದೆ. 7. ಚಾವಣಿಯ ಮೇಲೆ ಪ್ರಧಾನ ಶಿಖರದ ಸುತ್ತಲೂ ಅನೇಕ ಸಣ್ಣ ಶಿಖರಗಳ ಸಮೂಹವಿರುತ್ತದೆ. 8. ದೇವಾಲಯದ ಪ್ರವೇಶದ್ವಾರ ಅಥವಾ ಅದರ ಮುಂಭಾಗದಲ್ಲಿ ಸ್ವತಂತ್ರವಾದ ಅಲಂಕೃತ ತೋರಣಗಳು ಇರುತ್ತವೆ. 9. ಗರ್ಭಗುಡಿಯ ಬಾಗಿಲುವಾಡವನ್ನು ಹೆಚ್ಚು ಅಲಂಕಾರ ಮಾಡಲಾಗಿರುತ್ತದೆ. 10. ದ್ವಾರಬಂಧದ ಕಂಬಗಳ ಮೇಲೆ ಗಂಗೆಯಮುನೆಯರೊಂದಿಗೆ ದ್ವಾರಪಾಲಕರ ಶಿಲ್ಪಗಳನ್ನು ಸಣ್ಣ ಪ್ರಮಾಣದಲ್ಲಿ ಉಬ್ಬುಶಿಲ್ಪದ ರೀತಿಯಲ್ಲಿ ರೂಪಿಸಲಾಗಿರುತ್ತದೆ. 11. ಪ್ರಧಾನ ಮಂದಿರದ ಸುತ್ತ ಶೈವ ದೇವಾಲಯಗಳಲ್ಲಿ ಪಂಚಾಯತನ ಮತ್ತು ವೈಷ್ಣವ ದೇವಾಲಯಗಳಲ್ಲಿ ವ್ಯೂಹಪದ್ಧತಿಯಲ್ಲಿ ಪರಿವಾರ ದೇವತೆಗಳ ಗುಡಿಗಳನ್ನು ನಿರ್ಮಿಸಲಾಗಿರುತ್ತದೆ. 12. ದೇವೀಮಂದಿರಗಳು ಪ್ರತ್ಯೇಕವಾಗಿದ್ದು ಸ್ವತಂತ್ರ ಸ್ವಯಂಪ್ರಧಾನ ದೇವಮಂದಿರಗಳಾಗಿರುತ್ತವೆ.

  ನಾಗರಶೈಲಿಯ ಮೂಲವನ್ನು ಗುಪ್ತವಂಶದ ಪ್ರಾರಂಭಿಕ ಹಂತದ ಕೆಲವು ದೇವಾಲಯಗಳಲ್ಲಿ ಗುರುತಿಸಬಹುದಾಗಿದೆ. ಭಾರತೀಯ ದೇವಾಲಯ ವಾಸ್ತು ಪದ್ಧತಿಗಳು ಗುಪ್ತರ ಕಾಲದ ಮೊದಲ ಹಂತದ ಸರಳ ದೇವಾಲಯಗಳಲ್ಲಿ ರೂಪಗೊಂಡು ಕ್ರಮೇಣ ಪ್ರತ್ಯೇಕ ಶೈಲಿಗಳಾಗಿ ಬೆಳೆದುಬಂದವು. ಭೂಮಾರಾ ದೇವಾಲಯವನ್ನು ಇಂಥ ಮೊದಲ ಹಂತದ ದೇವಾಲಯಗಳಿಗೆ ನಿದರ್ಶನವಾಗಿ ಉದಾಹರಿಸಬಹುದು. ನಾಚ್ನದ ಪಾರ್ವತೀಮಂದಿರ ಇದಕ್ಕೆ ಮತ್ತೊಂದು ಉತ್ತಮ ನಿದರ್ಶನ.  		
	(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ